ನೀತಿಕಥೆಗಳು


ಮಹಾ ಸಾಹಸಿ [ಬಾಲೋಪಯೋಗೀನೀತಿ ಕಥೆಗಳು] 
ಕಳೆದ ಅಕ್ಟೋಬರ್ ತಿಂಗಳೊಂದರಲ್ಲೇ ಶ್ರೀ ಪಳಕಳದಿಂದ ರಚಿತ ಮಕ್ಕಳ ೨ ಕಿರು ಹೊತ್ತಗೆಗಳನ್ನು ಒಲವಿನ ಓದುಗರಿಗೆ ಒಪ್ಪಿಸಿರುವ ಯುಗ ಪುರುಷ ಪ್ರಕಟಣಾಲಯದ ಮೂಲಕ ಇದೀಗ ಮತ್ತೊಂದು ನೂತನ ಕೃತಿ ‘ಮಹಾ ಸಾಹಸಿ’ಯನ್ನೂ ಪ್ರಕಟಿಸಲು ಬಲು ಹೆಮ್ಮಯೆನಿಸಿದೆ.
ಬಾಲೋಪಯೋಗಿಯಾದ ಈ ನೀತಿ ಕಥೆಗಳು ಒಂದಕ್ಕಿಂತ ಮತ್ತೊಂದು ಮುದ್ದು ಕಿರುಕಂದರ ಮನೋಮಂದಾರವನ್ನು ಅರಳಿಸುವಲ್ಲಿ ಬಹಳಷ್ಟು ಪರಿಣಾಮಕಾರಿಯೆಂದು ಹೆಚ್ಚು ಹೇಳಬೇಕಾಗಿಲ್ಲ. ಏನಿದ್ದರೂ ಇಂತಹ ಸಂಗ್ರಾಹ್ಯ ಸತ್ಕೃತಿಯನ್ನು ಸಾಕಷ್ಟು ಸಂಖ್ಯೆಯಲ್ಲಿ ಮುಂದಿನ ಜನಾಂಗದ ಇಂದಿನ ಬಾಲಕರು ಓದಿ ಆ ತಿರುಳನ್ನು ಮೈ ಗೂಡಿಸಿಕೊಂಡಾಗ ಕೃತಿ ರಚಯಿತರ ಹಾಗೂ ಪ್ರಕಾಶಕರ ಶ್ರಮ ಸಾರ್ಥಕ. ಅಂತಾಗಲೆಂದು ಹಾರೈಸುವುದರೊಂದಿಗೆ ಸನ್ಮಿತ್ರ ಸಹೃದಯ ಶ್ರೀ ಪಳಕಳ ಸೀತಾರಾಮ ಭಟ್ಟರನ್ನು, ಕೃತಿ ಮುದ್ರಣಗೈದ ಯುಗಪುರುಷ ಮುದ್ರಣಾಲಯದವರನ್ನೂ ಆವರಣ ಪುಟ ಹಾಗೂ ಒಳಪುಟಗಳಲ್ಲಿರುವ ಕಲಾಕೃತಿಗಳನ್ನು ವಿನಿರ್ಮಿಸುವಲ್ಲಿ ಸಹಕರಿಸಿದ ಕಲಾವಿದ ಶ್ರೀ ಕೆ. ದೇವಡಿಗಾರರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ.






ನ್ಯಾಯ ನಿರ್ಣಯ
ಒಬ್ಬ ರಷ್ಯನ್ನನು ಪಯಣ ಹೊರಟಿದ್ದ. ಯುರೋಪಿನ ದೇಶಗಳಲ್ಲಿ ಸುತ್ತಾಡುವುದು ಅವನ ಉದ್ದೇಶವಾಗಿತ್ತು. ಊರೂರು ಸುತ್ತಾಡುತ್ತ ಅವನು ವಾರ್ಸೋ ನಗರಕ್ಕೆ ಬಂದ. ಅವನ ಕೈಯಲ್ಲಿ ಒಂದು ಪತ್ರವಿತ್ತು. ಅವನ ಗೆಳೆಯ ಅದನ್ನು ಕೊಟ್ಟಿದ್ದ. ಅದರಲ್ಲಿ ಅವನು ಯಾರು, ಯಾವ ಉದ್ದೇಶದಿಂದ ಬಂದವನು ಎಂಬ ವಿವರಗಳಿದ್ದವು. ವಾರ್ಸೋ ನಗರದ ನಿವಾಸಿ ಒಬ್ಬನಿಗೆ ಬರೆದ ಪತ್ರವಿದು. ಪಯಣಿಗನು ಸಂಬಂಧಪಟ್ಟ ವ್ಯಕ್ತಿಯನ್ನು ಕಂಡುಹುಡುಕಿದ. ಅವನಿಗೆ ಪತ್ರವನ್ನು ತೋರಿಸಿದ ಒಡನೆ ವಾರ್ಸೋ ನಿವಾಸಿ ಆತನನ್ನು ಆದರದಿಂದ ಬರಮಾಡಿಕೊಂಡ. ಅವನಿಗೆ ಬೇಕಾದ ಅನುಕೂಲತೆಗಳನ್ನು ಒದಗಿಸಿಕೊಟ್ಟ.
ಪಯಣಿಗ ಅಲ್ಲಿ ಕೆಲವು ದಿನ ತಂಗಿದ. ನೋಡ ತಕ್ಕ ಸ್ಥಳಗಳನ್ನೆಲ್ಲ ನೋಡಿಕೊಂಡ. ಒಂದು ವಾರ ಕಾಲ ಬೇರೆ ಊರುಗಳಲ್ಲಿ ಸುತ್ತಾಡಿ ಮತ್ತೆ ಪುನಃ ಆ ನಗರಕ್ಕೆ ಹಿಂದೆ ಬಂದು ಪಯಣ ಮುಂದುವರಿಸಲು ನಿಶ್ಚಯಿಸಿದ. ಹಾಗೆ ಹೋಗುವಾಗ ತನ್ನಲ್ಲಿದ್ದ ಒಂದು ಪೆಟ್ಟಿಗೆಯನ್ನು ವಾರ್ಸೋ ನಿವಾಸಿಯ ವಶ ಒಪ್ಪಿಸಿದ. “ಒಂದು ವಾರ ಬಿಟ್ಟು ನಾನು ಹಿಂದಿರುಗಿ ಬರುತ್ತೇನೆ. ಅಲ್ಲಿಯವರೆಗೆ ಈ ಪೆಟ್ಟಿಗೆ ನಿಮ್ಮಲ್ಲಿರಲಿ. ಅಮೂಲ್ಯವಾದ ಮುತ್ತು ರತ್ನಗಳು ಇದರಲ್ಲಿವೆ. ಇನ್ನೊಬ್ಬರಿಗೆ ಸಲ್ಲಬೇಕಾದ ವಸ್ತುಗಳಿವು. ದಯವಿಟ್ಟು ಇದನ್ನು ನಿಮ್ಮ ವಶ ಇರಿಸಿಕೊಳ್ಳಿ. ಮುಂದಿನ ವಾರ ನಾನು ಇದನ್ನು ಕೊಂಡೊಯ್ಯುವೆ” ಎಂದು ಕೇಳಿಕೊಂಡ. ಮನೆಯ ಯಜಮಾನ ಅವನ ಮಾತಿಗೆ ಒಪ್ಪಿದ. ಪೆಟ್ಟಿಗೆಯನ್ನು ತನ್ನಲ್ಲಿ ಇರಿಸಿಕೊಂಡ.
ಒಂದು ವಾರ ಕಳೆಯಿತು. ಪಯಣಿಗೆ ಹಿಂದಿರುಗಿ ಬಂದ. ತನ್ನ ಪೆಟ್ಟಿಗೆಯನ್ನು ಹಿಂದೆ ಕೊಡುವಂತೆ ಮನೆಯಾತನನ್ನು ಬೇಡಿಕೊಂಡ . ಅವನ ಮಾತು ಕೇಳಿದ ಯಜಮಾನನೂ ಅವನ ಹೆಂಡತಿಯೂ ಆಶ್ಚರ್ಯ ನಟಿಸಿದರು. “ಯಾವ ಪೆಟ್ಟಿಗೆ? ಯಾರು ಕೊಟ್ಟದ್ದು? ಯಾವಾಗ? ನಮಗೆ ಯಾವ ಸಂಗತಿಯೂ ಗೊತ್ತಿಲ್ಲವಲ್ಲ!” ಎಂದರು.
ಪಯಣಿಗನಿಗೆ ದಿಕ್ಕೇ ತೋಚದಂತಾಯಿತು. ಅವನು ಊರವರಲ್ಲಿ ದೂರು ಕೊಟ್ಟ. ಅವರು ಬಂದರು. ಮನೆಯಾತನನ್ನು ಪ್ರಶ್ನಿಸಿದರು. “ಈ ಪಯಣಿಗನಿಗೆ ತಲೆ ಕೆಟ್ಟಿದೆ. ಆದುದರಿಂದ ಏನೇನೋ ಮಾತಾಡುತ್ತಿದ್ದಾನೆ. ಅವನು ಪೆಟ್ಟಿಗೆ ಕೊಟ್ಟುದೂ ಇಲ್ಲ; ನಾವದನ್ನು ಪಡೆದುದೂ ಇಲ್ಲ” ಎಂದು ಬಿಟ್ಟ ಮನೆಯಾತ.
ಪಯಣಿಗ ಪೋಲೀಸರಲ್ಲಿ ದೂರುಕೊಟ್ಟ. ಅವರು ಪೆಟ್ಟಿಗೆ ಕೊಟ್ಟ ಬಗ್ಗೆ ರುಜುವಾತು ಏನಿದೆ ಎಂದು ಅವನನ್ನು ಪ್ರಶ್ನಿಸಿದರು. ಪಯಣಿಗೆ ತನ್ನಲ್ಲಿದ್ದ ಕೀಲಿಕೈ ತೋರಿಸಿದ. ಆದರೆ ಪೋಲೀಸರು ಒಪ್ಪಲಿಲ್ಲ. “ಸಾಕ್ಷಿಗಳಿಲ್ಲದೆ ಕೈಚೀಟ ಸಹ ಪಡೆಯದೆ ಅಷ್ಟು ಅಮೂಲ್ಯ ವಸ್ತುಗಳನ್ನು ಹೇಗೆ ಕೊಟ್ಟೆ? ನಾವೇನೀ ಮಾಡಲಾರೆವು” ಎಂದರು ಅವರು. ಆದರೂ ದೇಶದ ಗವರ್ನರರಲ್ಲಿ ಆತ ದೂರು ಕೊಡಬಹುದು ಎಂಬ ಸಲಹೆ ನೀಡಿದರು ಅವರಲ್ಲಿಗೆ ಅವನನ್ನು ಕರೆದೊಯ್ದರು.
ಗವರ್ನರರು ಪಯಣಿಗನ ದೂರನ್ನು ತಾಳ್ಮೆಯಿಂದ ಕೇಳಿಕೊಂಡರು. ಮತ್ತೆ ಕ್ಷಣಕಾಲ ಆ ಬಗ್ಗೆ ಯೋಚಿಸಿದರು. ಅನಂತರ ಆಪಾದಿತನಿಗೆ ಹೇಳಿ ಕಳಿಸಿದರು. ಅವನು ಬಂದಾಗ ಅವರು ಅವನನ್ನು ತಮ್ಮ ಎದುರುಗಡೆಯ ಕುರ್ಚಿಯಲ್ಲಿ ಕೂಡಿಸಿದರು. ಅವನ ಕೈಯಲ್ಲಿ ಒಂದು ಕಾಗದವನ್ನೂ ಲೇಖನಿಯನ್ನೂ ಕೊಟ್ಟರು. ತಾನು ಹೇಳಿದಂತೆ ಅವನು ಅದರಲ್ಲಿ ಬರೆಯಬೇಕೆಂದು ಸೂಚಿಸಿದರು. ಮತ್ತು “ಪ್ರೀತಿಯ ನನ್ನವಳೇ, ನನ್ನ ಗುಟ್ಟು ರಟ್ಟಾಗಿದೆ. ಈ ಚೀಟು ತರುವವರಲ್ಲಿ ಆ ಪೆಟ್ಟಿಗೆಯನ್ನು ಕೊಟ್ಟು ಕಳಿಸು” ಎಂದು ಬರೆದು ಅದರ ಕೆಳಗಡೆ ಅವನು ತನ್ನ ಸಹಿ ಹಾಕಬೇಕು ಎಂದು ಅಪ್ಪಣೆ ಕೊಟ್ಟರು ಬಂದವನು ಇದಕ್ಕೆ ಸಿದ್ಧನಿರಲಿಲ್ಲ. ತಾನು ಬರೆಯಲಾರೆ ಎಂದು ಹಠ ಹಿಡಿದ. “ಹಾಗಾದರೆ ನೀನೇ ಅಪರಾಧಿ ಎಂದು ಸಾಭೀತಾಯಿತು ನೀನು ಶಿಕ್ಷೆ ಅನುಭವಿಸಬೇಕಾಗುತ್ತದೆ” ಎಂದು ಗವರ್ನರರು ಎಚ್ಚರಿಕೆ ಕೊಟ್ಟಾಗ ಅವನು ಅವರು ಹೇಳಿದಂತೆ ಒಪ್ಪಲೇಬೇಕಾಯಿತು.
ಪತ್ರ ಬರೆದಾಯಿತು. ಪತ್ರಕ್ಕೆ ಅವನ ಸಹಿಯೂ ಬಿತ್ತು. ಸೇವಕನ ಮೂಲಕ ಅದನ್ನು ಅವನ ಮನೆಗೆ ಕಳಿಸಲಾಯಿತು. ಪತ್ರ ಕಂಡೊಡನೆ ಅವನ ಹೆಂಡತಿಯ ಮುಖ ಬಿಳಿಚಿಕೊಂಡಿತು. ನಡುಗುತ್ತ ಅವಳು ಒಳಹೋಗಿ ಪೆಟ್ಟಿಗೆಯನ್ನು ತಂದೊಪ್ಪಿಸಿದಳು. ಸೇವಕ ಅದನ್ನು ತಂದು ಗವರ್ನರರಿಗೆ ಒಪ್ಪಿಸಿದ. ಅವರು ಅದನ್ನು ಪಯಣಿಗನಿಗೆ ಕೊಟ್ಟರು. “ನಿನ್ನ ವಸ್ತುಗಳೆಲ್ಲ ಸುರಕ್ಷಿತವಾಗಿ ಇವೆಯೇ ನೋಡಿಕೊ” ಎಂದರು.
ವ್ಯಾಪಾರಿ ತನ್ನ ಕೀಲಿಕೈ ಬಳಸಿ ಪೆಟ್ಟಿಗೆಯ ಬಾಯಿ ತೆರೆದ. ಅವನ ವಸ್ತುಗಳೆಲ್ಲ ಸುರಕ್ಷಿತವಾಗಿದ್ದವು. ಸಂತೋಷದಿಂದ ಅವನು ಗವರ್ನರರಿಗೆ ವಂದಿಸಿ, ಅಲ್ಲಿಂದ ಹೊರಟು ಹೋದ.
ಅಪರಾಧಿ ತಕ್ಷಣ ದೇಶ ಬಿಟ್ಟು ಹೋಗುವಂತೆ ಗವರ್ನರರ ಅಪ್ಪಣೆಯಾಯಿತು.


ಕಪ್ಪೆ ರಾಜಕುಮಾರಿಯ ಕತೆ
ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಗಂಡು ಮಕ್ಕಳು. ರಾಜಕುಮಾರರು ಮದುವೆ ವಯಸ್ಸಿಗೆ ಬಂದಾಗ ಅವರಿಗೆ ಮದುವೇ ಮಾಡಲು ರಾಜ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಮೂರೂ ರಾಜಕುಮಾರರಿಗೂ ಒಂದೊಂದು ಬಿಲ್ಲು ಬಾಣ ಕೊಟ್ಟು, ಯಾರು ಯಾರ ಮನೆಗೆ ಬಾಣವನ್ನು ಕಳಿಸುತ್ತಾರೊ ಅವರ ಮನೆಯಿಂದ ಹೆಣ್ಣನ್ನು ತಂದು ಮದುವೆ ಮಾಡಲಾಗುವುದು ಎಂದು ಹೇಳುತ್ತಾನೆ.
       ಮೊದಲನೇ ರಾಜಕುಮಾರ ಅಗಸರ ಮನೆಗೆ ಬಾಣ ಕಳಿಸುತ್ತಾನೆ. ಸರಿ ಅವನಿಗೆ ಅಗಸರ ಮಗಳೊಡನೆ ಮದುವೆ ಅಗುತ್ತದೆ. ಎರಡನೇ ರಾಜಕುಮಾರ ಕುಂಬಾರನ ಮನೆಗೆ ಬಾಣ ಕಳಿಸುತ್ತಾನೆ. ಅವನಿಗೆ ಕುಂಬಾರನ ಮಗಳೊಡನೆ ಮದುವೆ ಆಗುತ್ತದೆ. ಕಿರಿಯ ರಾಜಕುಮಾರ ಕಪ್ಪೆ ಮನೆಗೆ ಬಾಣ ಕಳಿಸುತ್ತಾನೆ. ರಾಜ ಆಡಿದ ಮಾತಿನಂತೆ, ಕೊನೆಯವನಿಗೆ ಕಪ್ಪೆಯ ಮಗಳೊಡನೆ ಮದುವೆ ಮಾಡುತ್ತಾನೆ. ಕಿರಿಯ ರಾಜಕುಮಾರ ಕಪ್ಪ್ದೆಗಾಗಿ ಒಂದು ಗೂಡನ್ನು ಕಟ್ಟಿ ಅಲ್ಲಿ ಕಪ್ಪೆ ವಾಸಿಸುವಂತೆ ಎರ್ಪಾಡು ಮಾಡುತ್ತಾನೆ.
       ಒಮ್ಮೆ ರಾಜ ತನ್ನ ಮೂರು ಪುತ್ರರನ್ನು ಕರೆದು ನಾಳೆ ನೀವೆಲ್ಲರೂ ನಿಮ್ಮ ಹೆಂಡತಿಯರಿಂದ ಒಂದು ಮಗುವಿನ ಉಡುಗೆಯನ್ನು ತಯಾರಿಸಿಕೊಂಡು ಬರಬೇಕು ಎಂದು ಅಪ್ಪಣೆಯಿತ್ತ. ಅಗಸ ಮತ್ತು ಕುಂಬಾರನ ಮಗಳು ಹೇಗೊ ತಮಗೆ ತಿಳಿದ ಹಾಗೆ ಉಡುಗೆಯನ್ನು  ತಯಾರಿಸಿದರು. ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ ಮಕ್ಕಳ ಉಡುಪನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಉಡುಪನ್ನು ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಉಡುಗೆ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಸುಂದರ ಉಡುಗೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ. ಸಂತೋಷದಿಂದ ನಾಳೆ ಆಸ್ತಾನಕ್ಕೆ ಉಡುಗೆಯನ್ನು ಕೊಂಡೊಯುತ್ತಾನೆ. ರಾಜ ಮೊದಲಿಗೆ ಅಗಸನ ಮಗಳ ಉಡುಗೆ ನೋಡುತ್ತಾನೆ, ಅಷ್ಟೇನೂ ನಯಗಾರಿಕೆಯಿಲ್ಲದ ಉಡುಗೆ ಎಂದು ತಿರಸ್ಕರಿಸುತ್ತಾನೆ. ನಂತರ ಕುಂಬಾರನ ಮಗಳ ಉಡುಗೆಯನ್ನು ಕೂಡ ತಿರಸ್ಕರಿಸುತ್ತಾನೆ. ಕಿರಿಯ ರಾಜಕುಮಾರ ಉಡುಗೆಯನ್ನು ತೋರಿದಾಗ ರಾಜನ ಕಣ್ಣುಗಳು ಅಗಲವಾಗಿ, ವಾಹ್ ಎಂಬ ಉದ್ಗಾರದೊಂದಿಗೆ ಕಿರಿಯ ಮಗನನ್ನು ಆಲಂಗಿಸಿ ಕಪ್ಪೆ ತಯಾರಿಸಿದ ಉಡುಗೆ ಅತ್ಯುತ್ತಮವಾದುದೆಂದು ಬಹುಮಾನವನ್ನು ಕೊಡುತ್ತಾನೆ.
        ಇನ್ನೂ ಕೆಲವು ದಿನಗಳಾದ ಮೇಲೆ ರಾಜ ಮತ್ತೆ ತನ್ನ ಮೂರು ಪುತ್ರರನ್ನು ಕರೆದು, ಮಕ್ಕಳೆ ನಿಮ್ಮ ಹೆಂಡಂದಿರಿಂದ ಒಂದು ಒಳ್ಲೆಯ ಸಿಹಿತಿಂಡಿಯನ್ನು ಮಾಡಿಸಿ ತನ್ನಿ ಎಂದು ಅಪ್ಪಣೆ ಕೊಡುತ್ತಾನೆ. ಈ ಬಾರಿ ಅಗಸನ ಮಗಳು ಮತ್ತು ಕುಂಬಾರನ ಮಗಳು ಕಪ್ಪೆ ಇಷ್ಟು ಸುಂದರವಾಗಿ ಉಡುಗೆ ಹೊಲಿದುಕೊಟ್ಟಿದೆ ಎಂದರೆ, ಈ ಬಾರಿ ಕಪ್ಪೆ ಏನು ಮಾಡುವುದೋ ಅದನ್ನೇ ನಾವೂ ಮಾಡುವುದು ಎಂದು ತೀರ್ಮಾನಿಸಿ ಕಪ್ಪೆ ಸಿಹಿತಿಂಡಿ ಮಾಡುವುದನ್ನೇ ಕಾಯುತ್ತಾ ಕುಳಿತಿದ್ದರು.
ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಮತ್ತೇ ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಈ ಬಾರಿ ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ  ಸಿಹಿ ತಿಂಡಿಯನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಸಿಹಿ ತಿಂಡಿ ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಸಿಹಿತಿಂಡಿ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಕೇಕಿನಿಂದ ಮಾಡಿದ ಅರಮನೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ ಜೊತೆಗೆ ಸಂತೋಷವೂ ಅಯಿತು. ಕಪ್ಪೆ ಅಗಸನ ಮಗಳು ಕುಂಬಾರನ ಮಗಳು ನನ್ನ ಸಿಹಿತಿಂಡಿಯನ್ನು ಕಾಪಿ ಮಾಡಲು ಕಾಯುತ್ತಿರುವುದು ತಿಳಿದು ಎಲ್ಲರಿಗೂ ಕಾಣುವಂತೆ ಕೇಕ್ ಮಾಡಲು ಶುರುಮಾಡಿತು. ಮರೆಯಲ್ಲಿ ಅವಿತು ಅಗಸನ ಮಗಳು ಕುಂಬಾರನ ಮಗಳು ಕಪ್ಪೆ ಮಾಡುವರೀತಿಯಲ್ಲಿ ತಾವು ಕೇಕ್ ಮಾಡಲು ಪ್ರಾರಂಭಿಸಿದರು. ಎಲ್ಲಾಮಾಡಿ ಬೇಯಿಸುವಮುನ್ನ ಕಪ್ಪೆ ಸ್ವಲ್ಪ  ಹಸುವಿನ ಸೆಗಣಿಯನ್ನು ಕೇಕ್ ಮಿಶ್ರಣಕ್ಕೆ ಹಾಕಿತು. ಅಗಸನ ಮಗಳು ಕುಂಬಾರನ ಮಗಳು  ಸಗಣಿಯ ಬಗ್ಗೆ ಸ್ವಲ್ಪ ಅನುಮಾನಿತರಾದರೂ, ಅದನ್ನು ಹಾಕದೇ ಹೊದರೆ ಕೇಕ್ ಚೆನ್ನಾಗಿ ಬರುವುದಿಲ್ಲವೇನೊ ಎಂದುಕೊಂಡು ತಾವು ಸೆಗಣಿಯನ್ನು ಹಾಕಿ ಕೇಕ್ ಮುಗಿಸಿದರು.
          ಮಾರನೇ ದಿನ ಮೊದಲು ಅಗಸನ ಮಗಳ ಕೇಕ್ ತರಿಸಿದ ರಾಜ, ಅದರಿಂದ ಬರುತಿದ್ದ ಸೆಗಣಿ ವಾಸನೇ ನೊಡಿಯೆ ಕೇಕನ್ನು ಕಸದ ಬುಟ್ಟಿಗೆ ಎಸೆದ. ಕುಂಬಾರನ ಮಗಳ ಕೇಕ್ ಕೂಡಾ ಕಸದ ಬುಟ್ಟಿ ಸೇರಿತು. ಕಪ್ಪೆಯ ಕೇಕ್ ನೊಡಿ ರಾಜ ಸಂತೊಷಭರಿತನಾಗಿ ಕಿರಿಯಮಗನಿಗೆ ಮತ್ತೆ ಬಹುಮಾನ ಕೊಟ್ಟ.
ಸ್ವಲ್ಪ ದಿನಗಳ ನಂತರ ರಾಜ ಮತ್ತೆ ತನ್ನ ಮೂರು ಪುತ್ರರನ್ನು ಕರೆದು, ಮಕ್ಕಳೆ ನಾಳೆ ನಿಮ್ಮ ಹೆಂಡತಿಯರು ಸಭಾಂಗಣದಲ್ಲಿ ನೃತ್ಯ ಮಾಡಬೇಕು ಎಂದು ಅಪ್ಪಣೆ ಕೊಟ್ಟನು.ಅಗಸನ ಮಗಳು ಮತ್ತು ಕುಂಬಾರನ ಮಗಳು ತಮಗೆ ಕುಣಿಯುವುದಕ್ಕೆ ಬರದೇ ಇದ್ದರೂ ನಮಗೆ ಕಾಲುಗಳಿವೆ ಮನಸ್ಸಿಗೆ ಬಂದ ಹಾಗೆ ಕುಣಿಯುವುದು ಎಂದು ನಿರ್ಧರಿಸಿದರು. ಕಿರಿಯ ರಾಜಕುಮಾರ ಎಂದಿನಂತೆ ಮನಗೆ ಬಂದು ಅಳುತ್ತಾ ಕುಂತನು. ಕಪ್ಪೆ ತನ್ನ ಗೂಡಿನಿಂದ ಹೊರಬಂದು ಮತ್ತೆ ಯಾಕೆ ಅಳುತಿದ್ದೀಯ ಎಂದಿತು. ಅದಕ್ಕೆ ರಾಜಕುಮಾರನು ’ನೀನು ಬಟ್ಟೆಯನ್ನು ಹೊಲಿದೆ, ಸಿಹಿತಿಂಡಿಯನ್ನೂ ಮಾಡಿದೆ ಆದರೆ ನನ್ನ ತಂದೆ ನಾಳೆ ನೀನು ನೃತ್ಯ ಮಾಡಬೇಕೆಂದು ಹೇಳಿದ್ದಾರೆ ಏನು ಮಾಡುವುದೆಂದು ತಿಳಿಯದೆ ಅಳುತಿದ್ದೇನೆ” ಎಂದ ಹೇಳಿದ. ಇದನ್ನು ಕೇಳಿದ ಕಪ್ಪೆ, ಹೇಳಿತು, ನಾನು ಒಬ್ಬ ಋಶಿಯ ಶಾಪದಿಂದಾಗಿ ಕಪ್ಪೆ ಯಾಗಿದ್ದೇನೆ, ನಾಳೆ, ನೃತ್ಯದ ಸಮಯಕ್ಕೆ ಸರಿಯಾಗಿ ನಾನು ಚಿನ್ನದ ರಥದಲ್ಲಿ ಬಂದಿಳಿದು ನೃತ್ಯವನ್ನು ಮಾಡುತ್ತೆನೆ ಆದರೆ ಒಂದನ್ನು  ನೆನಪಿನಲ್ಲಿಡು ನನ್ನ ಈ ಕಪ್ಪೆ ಯ ಗೂಡನ್ನು ಮಾತ್ರಾ ಸುಟ್ಟು ಹಾಕಬೇಡ. ಇದನ್ನು ಕೇಳಿದ ರಾಜಕುಮಾರನ ಸಂತೊಷಕ್ಕೆ ಎಣೆಯೆಇಲ್ಲ.
ಮಾರನೇದಿನ, ಕುಂಬಾರನ ಮಗಳು ನೃತ್ಯ ಮಾಡಲು ಬಂದಳು, ಅವಳ ನೃತ್ಯವನ್ನು ನೋಡಿ ಎಲ್ಲರೂ ನಗಲಾರಂಬಿಸಿದರು. ಇದೇ ಗತಿ ಅಗಸನ ಮಗಳಿಗೂ ಅಯಿತು. ಆಗ ಭೂಮಿ ನಡುಗಿದಂತಾಗೆ ಎಲ್ಲರೂ ಸದ್ದು ಬಂದ ಕಡೆ ತಿರುಗಿದಾಗ ಬಂಗಾರದ ರಥದಿಂದ ಸುಂದರ ರಾಜಕುಮಾರಿ ಸಭಾಂಗಣಕ್ಕೆ ಬಂದಳು. ಮೂರನೇ ರಾಜಕುಮಾರ ಇವಳೇ ನನ್ನ ಹೆಂಡತಿ ಎಂದು ತಿಳಿಸಿದಾಗ ಎಲ್ಲರಿಗೂ ಸಂತೊಷವಾಯಿತು. ಕಪ್ಪೆ ರಾಜಕುಮಾರಿ ಅದ್ಭುತವಾಗಿ ನೃತ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದಳು. ಮೂರನೇ ರಾಜಕುಮಾರ ಅತಿಯಾದ ಸಂತೋಷದಿಂದ ಮನೆಗೆ ಹೊದ ಅಲ್ಲಿದ್ದ ಕಪ್ಪೆ ಗೂಡನ್ನು ನೋಡಿ, ಇನ್ನು ಇದು ಯಾಕೆ ಬೇಕು ಎಂದು ಅದನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟನು. ಅತಿಯಾದ ಸಂತೋಷದಲ್ಲಿ ಕಪ್ಪೆ ಹೇಳಿದ್ದ ಮಾತು ಮರೆತುಬಿಟ್ಟಿದ್ದನು. ಮನೆಗೆ ಹಿಂದಿರುಗಿದ ರಾಜಕುಮಾರಿ ಕಪ್ಪೆ ಗೂಡು ಸುಟ್ಟಿದ್ದನ್ನು ನೊಡಿದ ತಕ್ಷಣ ಪಾರಿವಾಳವಾಗಿ ಹಾರಿಹೊದಳು.
          ರಾಜಕುಮಾರನ ಸಂತೋಷ ಒಮ್ಮೆಲೆ ಇಳಿದು ದುಃಖಪೂರಿತನಾದನು. ರಾಜಕುಮಾರಿಯನ್ನು ಬಿಟ್ಟಿರಲಾರದೆ, ಅವಳನ್ನು ಹುಡಿಕಿ ತರುವೇನೆಂದು ರಾಜಕುಮಾರ ಹೊರಟನು. ಬಹಳಾ ದೂರ ನಡೆದಮೇಲೆ ಅವನಿಗೆ ಆಯಾಸವಾಗಿತ್ತು. ಹತ್ತಿರದಲ್ಲೇ ಒಂದು ಮನೆ ಕಾಣಿಸಿತು, ಒಳಗೆ ಹೊದ ರಾಜಕುಮಾರ ಅಲ್ಲಿ ಮುರು ಮೊಳದುದ್ದದ ಮೂಗಿರುವ ಒಬ್ಬ ಅಜ್ಜಿ ಕುಳಿತಿದ್ದುದು ಕಂಡು ತಿನ್ನಲು ಎನಾದರು ಸಿಗುವುದೇ ಎಂದು ಕೇಳಿದ. ಆ ಅಜ್ಜಿ ಅತನನ್ನು ಕೂಡಿಸಿ ಊಟ ಬಡಿಸಿದಳು. ಅಜ್ಜಿ  ನೀನು ಯಾರಪ್ಪ ಎಂದು ಕೇಳಿದಾಗ, ರಾಜಕುಮಾರ ತನ್ನ ಕತೆಯನ್ನು ಸವಿಸ್ತಾರವಾಗಿ ಹೇಳಿದ್ದನ್ನು ಕೇಳಿದ ಅಜ್ಜಿ, ನನಗೆ ನಿನ್ನ ಹೆಂಡತಿ ಎಲ್ಲಿದ್ದಾಳೆ ಎಂಬುದು ತಿಳಿದಿದೆ ಎಂದಳು. ಆಶ್ಚರ್ಯದಿಂದ ಎಲ್ಲಿದ್ದಾಳೆ ಹೇಳಜ್ಜಿ ಎಂದು ದಂಬಾಲು ಬಿದ್ದ. ಆಗ ಅಜ್ಜಿ, ನೀನು ಏಳು ಸಮುದ್ರವನ್ನು ದಾಟಿ ನಂತರ ಏಳು ಬೆಟ್ಟವನ್ನು  ಏರಿ, ಏಳನೇ ಬೆಟ್ಟದ ಮೇಲೆ ಒಂದು ಮರವಿರುತ್ತದೆ, ಅ ಮರವನ್ನು ಕಡಿದರೆ ನಿನಗೆ ಒಂದು ಪೆಟ್ಟಿಗೆ ಕಾಣುತ್ತದೆ, ಪೆಟ್ಟಿಗೇ ತೆರೆದರೆ ಒಂದು ಮೊಲವಿರುತ್ತದೆ, ಹುಷಾರಿಅಗಿರು ಮೊಲ ಓಡಿಹೊಗಬಹುದು. ಮೊಲವನ್ನು ಕತ್ತರಿಸಿದರೆ ಒಳಗೆ ಒಂದು ಪಾರಿವಾಳವಿರುತ್ತದೆ. ಹುಷಾರಾಗಿ ಪಾರಿವಾಳವನ್ನು ಹಿಡಿದಿಕೊ, ಪಾರಿವಾಳವನ್ನು ಕತ್ತರಿಸಿದರೆ ಒಂದು ಮೀನಿರುತ್ತದೆ. ಹುಷಾರಾಗಿ ಮೀನನ್ನು ಹಿಡಿದುಕೊ. ಮೀನನ್ನು ಕತ್ತರಿಸಿದರೆ ಒಳಗೆ ಒಂದು ಮೊಟ್ಟೆ ಕಾಣಿಸುತ್ತದೆ. ಆ ಮೊಟ್ಟೆಯನ್ನು ಒಡೆದರೆ ಒಳಗೆ ಒಂದು ಅರಮನೆಯಿರುತ್ತದೆ. ಅರಮನೆಯ ಮುಂದೆ ಓಂದು ಸೂಜಿಯಿರುತ್ತದೆ ಅದನ್ನು ಎತ್ತಿಕೊಂಡು ಅರಮನೆ ಒಳಗೆ ಹೊದರೆ ಅಲ್ಲಿ ನಿನ್ನ ಹೆಂಡತಿಯನ್ನು ಒಬ್ಬ ರಾಕ್ಷಸ ಚಾಟಿಯಿಂದ ಹೊಡಿಯುತ್ತಿರುತ್ತಾನೆ, ನಿನ್ನಲ್ಲಿರುವ ಸೂಜಿಯಲ್ಲಿ ರಾಕ್ಷಸನ ಪ್ರಾಣವಿರುತ್ತದೆ. ಸೂಜಿಯನ್ನು ಮುರಿ ರಾಕ್ಷಸ ಸಾಯುತ್ತಾನೆ. ನಂತರ ನೀನು ನಿನ್ನ ಹೆಂಡತಿಯನ್ನು ಮನೆಗೆ ಕರೆದೊಯ್ಯಬಹುದು. ಎಲ್ಲವನ್ನೂ ಕೇಳಿದ ರಾಜಕುಮಾರ ಅಜ್ಜಿಯನ್ನು ಕೇಳಿದ ಏಳನೇ ಬೆಟ್ಟದ ಮೇಲೆ ಎಷ್ಟೊಂದು ಮರಗಳಿರುತ್ತವೆ ಅದರಲ್ಲಿ ನೀನು ಹೇಳಿದ ಮರವನ್ನು ಹೇಗೆ ಕಂಡುಹಿಡಿಯುವುದು ಎಂದು ಕೇಳಿದಾಗ ಅಜ್ಜಿ, ನಾನು ನಿನಗೆ ಒಂದು ಮಂತ್ರಿಸಿದ ದಾರದ ಉಂಡೆಯನ್ನು ಕೊಡುತ್ತೇನೆ, ಅ ಉಂಡೆಯನ್ನು ಏಳನೇ ಬೆಟ್ಟದ ಮೇಲೆ ಬಿಡು, ಅ ಉಂಡೆ ಉರುಳಿಕೊಂಡು ಹೋಗಿ ನಿನಗೆ ಮರವನ್ನು ತೋರಿಸುತ್ತದೆ. ಅತಿಯಾದ ಸಂತೋಷದಿಂದ ಅಜ್ಜಿಗೆ ನಮಸ್ಕ್ಚರಿಸಿ ರಾಜಕುಮಾರ ಹೊರಡುತ್ತಾನೆ.
          ಹೋಗುವಾಗ ದಾರಿಯಲ್ಲಿ ಒಂದು ಮೊಲವನ್ನು ಒಂದು ನರಿ ಅಟ್ಟಿಸಿಕೊಂಡು ಹೋಗುತಿದ್ದುದನ್ನು ನೋಡಿ ರಾಜಕುಮಾರ ನರಿಯನ್ನು ಹೆದರಿಸಿ ಒಡಿಸಿ ಮೊಲವನ್ನು ರಕ್ಷಿಸಿದನು. ಮೊಲ ರಾಜನಿಗೆ ನೀನು ನನ್ನ್ನ ಪ್ರಾಣವನ್ನು ಉಳಿಸಿದ್ದರಿಂದ ನಿನ್ನ ಕಷ್ಟಕಾಲದಲ್ಲ್ನಿ ನನ್ನನ್ನು ನೆನೆಸಿಕೊ, ನಾನು ಬಂದು ನಿನಗೆ ಸಹಾಯ ಮಾಡುತ್ತೇನೇ ಎಂದು ಹೇಳಿತು. ರಾಜಕುಮಾರ ಹಾಗೆ ಅಗಲಿ ಎಂದು ತನ್ನ ಪ್ರಯಾಣ ಮುಂದುವರೆಸಿದ. ಸ್ವಲ್ಪ ದೂರದಲ್ಲಿ ಅತಿಯಾದ ಗಾಳಿಯಿಂದಾಗಿ ಒಂದು ಪಾರಿವಾಳದ ಗೂಡು ಮರದ ಮೇಲಿಂದ ಕೆಳಗೆ ಬಿದ್ದು, ಪಾರಿವಾಳಗಳು ದುಃಖಿತಗೊಂಡಿರುವುದನ್ನು ನೋಡಿ ರಾಜಕುಮಾರ, ಪಾರಿವಾಳದ ಗೂಡನ್ನು ಸುರಕ್ಷಿತವಾಗಿ ಎತ್ತಿ ಮರದಮೇಲಿಟ್ಟನು. ಅದನ್ನು ನೋಡಿದ ಪಾರಿವಾಳಗಳು ಸಂತೋಷದಿಂದ, ನಮ್ಮ ಕಷ್ಟಕಾಲದಲ್ಲಿ ನೀನು ಸಹಾಯಮಾಡಿದ್ದೀಯ ನಿನ್ನ ಕಷ್ಟಕಾಲದಲ್ಲಿ ನಮ್ಮನ್ನು ನೆನೆಸಿಕೊ, ನಾವು ಬಂದು ನಿನಗೆ ಸಹಾಯಮಾಡುತ್ತೇವೆ ಎಂದವು. ಹಾಗೆ ಆಗಲಿ ಎಂದು ರಾಜಕುಮಾರ ತನ್ನ ಪ್ರಯಾಣಮುಂದುವರೆಸಿದ. ತಾನು ದಾಟಬೇಕಾಗಿದ್ದ ಏಳು ಸಮುದ್ರಗಳಲ್ಲಿ ಮೊದಲನೇ ಸಮುದ್ರದ ಸಮೀಪ ಬಂದಾಗ, ಕೆಲವು ಮೀನುಗಳು ದಡದಲ್ಲಿ ನೀರಿನಿಂದ ಹೊರಗಡೆ ಒದ್ದಾಡುತ್ತಿರುವುದನ್ನು ಕಂಡು ರಾಜಕುಮಾರ ಎಲ್ಲ ಮೀನುಗಳನ್ನು ಎತ್ತಿ ಸಮುದ್ರದಲ್ಲಿ ಬಿಟ್ಟನು. ಆಗ ಆ ಮೀನುಗಳು ರಾಜಕುಮಾರನಿಗೆ, ನಿನ್ನ ಕಷ್ಟಕಾಲದಲ್ಲಿ ನಮ್ಮನ್ನು ನೆನೆಸಿಕೊ ನಾವು ಬಂದು ಸಹಾಯ ಮಾಡುತ್ತೇವೆ ಎಂದು ಹೇಳಿದವು.
ನಂತರ, ರಾಜಕುಮಾರ ಅಜ್ಜಿ ಹೇಳಿದಂತೆ, ಏಳು ಸಮುದ್ರ ದಾಟಿ ಮತ್ತೆ ಏಳು ಬೆಟ್ಟಗಳನ್ನು ಹತ್ತಿ, ಕೊನೆಯ ಬೆಟ್ಟದ ಮೇಲೆ ಅಜ್ಜಿ ಕೊಟ್ಟಿದ್ದ ದಾರದ ಉಂಡೆಯನ್ನು ಉರುಳಿಬಿಟ್ಟನು. ಆ ದಾರದ ಉಂಡೆ ಉರುಳಿಕೊಂಡು ಹೊಗಿ ಒಂದು ಮರದ ಕೆಳಗೆ ನಿಂತು ಕೊಂಡಿತು. ಆಗ ರಾಜಕುಮಾರನು ಆ ಮರವನ್ನು ಕತ್ತರಿಸಿದನು, ಓಳಗೆ ಅಜ್ಜಿ ಹೇಳಿದ್ದಂತೆ ಒಂದು ಪೆಟ್ಟಿಗೆ ಇತ್ತು. ಪೆಟ್ಟಿಗೆಯ ಮುಚ್ಚಳವನ್ನು ತೇರೆದಾಗ, ಅಲ್ಲಿದ್ದ ಮೊಲ ಚಂಗನೆ ಎಗರಿ ಕಾಡಿನೊಳಗೆ ಓಡಿಹೊಯಿತು. ಆಗ ರಾಜಕುಮಾರನಿಗೆ ಏನು ಮಾಡಬೇಕೊ ತಿಳಿಯದೆ ದುಃಖಿತನಾದನು, ತಟ್ಟನೆ, ತಾನು ಸಹಾಯ ಮಾಡಿದ್ದ ಮೊಲಗಳ ನೆನೆಪಾಗಿ, ಅವುಗಳನ್ನು ನೆನೆಸಿಕೊಂಡನು. ಆಗ ಮೊಲಗಳು ಬಂದು, ನಮ್ಮಿಂದ ಏನಾಗಬೇಕಾಗಿತ್ತು ಎಂದು ಕೇಳಿದವು. ಅಗ ರಾಜಕುಮಾರನು, ಪೆಟ್ಟಿಗೆಯಲ್ಲಿದ್ದ ಮೊಲವನ್ನು ಹಿಡಿದು ತಂದು ಕೊಡಬೇಕಾಗಿ ಕೇಳಿಕೊಂಡನು. ಆಗ ಮೊಲಗಳು ಹೋಗಿ ರಾಜಕುಮಾರನಿಗೆ ಬೇಕಿದ್ದ ಮೊಲವನ್ನು ಹಿಡಿದುಕೊಂಡು ಬಂದವು. ರಾಜಕುಮಾರ ಮೊಲಗಳಿಗೆ ಧನ್ಯವಾದವನ್ನು ಹೇಳಿ, ಮೊಲವನ್ನು ಕತ್ತರಿಸಿದನು, ಆಗ ಒಳಗಿದ್ದ ಪಾರಿವಾಳವು ರೊಯ್ಯನೆ ಹಾರಿಹೊಯಿತು. ಆಗ ರಾಜಕುಮಾರನಿಗೆ ಏನು ಮಾಡಬೇಕೊ ತಿಳಿಯದೆ ದುಃಖಿತನಾದನು, ತಟ್ಟನೆ, ತಾನು ಸಹಾಯ ಮಾಡಿದ್ದ ಪಾರಿವಾಳಗಳ ನೆನೆಪಾಗಿ, ಅವುಗಳನ್ನು ನೆನೆಸಿಕೊಂಡನು. ಆಗ ಪಾರಿವಾಳಗಳು ಬಂದು, ನಮ್ಮಿಂದ ಏನಾಗಬೇಕಾಗಿತ್ತು ಎಂದು ಕೇಳಿದವು. ಅಗ ರಾಜಕುಮಾರನು, ಮೊಲದೊಳಗಿದ್ದ ಪಾರಿವಾಳವು ಹಾರಿಹೊಗಿದೆ ಅದನ್ನು ಹಿಡಿದು ತಂದು ಕೊಡಬೇಕಾಗಿ ಕೇಳಿಕೊಂಡನು.ಆಗ ಪಾರಿವಾಳಗಳು ಹಾರಿ ಹೋಗಿ ರಾಜಕುಮಾರನಿಗೆ ಬೇಕಿದ್ದ ಪಾರಿವಾಳವನ್ನು ಹಿಡಿದುಕೊಂಡು ಬಂದವು. ರಾಜಕುಮಾರ ಪಾರಿವಾಳಗಳಿಗೆ ಧನ್ಯವಾದವನ್ನು ಹೇಳಿ, ಪಾರಿವಾಳವನ್ನು ಕತ್ತರಿಸಿದನು, ಅದರೊಳಗಿದ್ದ ಮೀನು ರಾಜಕುಮಾರನ ಕೈನಿಂದ ಜಾರಿ ನೀರಿನಲ್ಲಿ ಮರೆಯಾಗಿ ಹೋಯಿತು. ಚಿಂತಾಕ್ರಾಂತನಾದ ರಾಜಕುಮಾರ ತಾನು ರಕ್ಷಿಸಿದ್ದ ಮೀನುಗಳನ್ನು ನೆನೆಪಿಸಿಕೊಂಡನು. ಒಡನೆಯ ಮೀನುಗಳು ರಾಜಕುಮಾರನಿದ್ದ ಬಳಿಗೆ ಬಂದು ತಮ್ಮನ್ನು ನೆನೆಪಿಸಿಕೊಂಡ ಕಾರಣ ಕೇಳಿದವು. ರಾಜಕುಮಾರ, ತಪ್ಪಿಸಿಕೊಂಡ ಮೀನಿನ ಬಗ್ಗೆ ತಿಳಿಸಿದಾಗ, ಇತರ ಮೀನುಗಳು ಕ್ಷಣಮಾತ್ರದಲ್ಲಿ ರಾಜಕುಮಾರನಿಗೆ ಬೇಕಿದ್ದ ಮೀನನ್ನು ಹುಡುಕಿ ತಂದೊಪ್ಪಿಸಿದವು. ಹರ್ಷಚಿತ್ತನಾದ ರಾಜಕುಮಾರ ಮೀನನ್ನು ಕತ್ತರಿಸಿದಾಗ, ಅದರೊಳಗೆ ಅಜ್ಜಿ ಹೇಳಿದ್ದ ಹಾಗೆ ಒಂದು ಮೊಟ್ಟೆಯಿತ್ತು. ಅದನ್ನು ಒಡೆದನು, ಮೊಟ್ಟೆಯೊಳಗೆ ಒಂದು ಅರಮನೆಯಿತ್ತು. ಅರಮನೆಯ ಮುಂದೆ ಓಂದು ಸೂಜಿ ಬಿದ್ದಿದ್ದುದನ್ನು ನೊಡಿ ಅಜ್ಜಿ ಹೇಳಿದಂತೆ ಅದನ್ನು ಎತ್ತಿಕೊಂಡು ಅರಮನೆ ಒಳಗೆ ಹೋದನು. ಅಲ್ಲಿ ಒಬ್ಬ ರಾಕ್ಷಸ ತನ್ನ ಹೆಂಡತಿಯಾದ ಕಪ್ಪೆ ರಾಜಕುಮಾರಿಯನ್ನು ಹೊಡೆಯುತಿದ್ದುದನ್ನು ನೋಡಿ, ಆ ರಾಕ್ಷಸನಿಗೆ ತನ್ನ ಹೆಂಡತಿಯನ್ನು ಬಿಟ್ಟು ಬಿಡು ಎಂದು ಹೇಳಿದನು, ಅದಕ್ಕೆ ರಾಕ್ಷಸ ನನಗೆ ಹೇಳಲು ನೀನು ಯಾರು ಎಂದಾಗ, ರಾಜಕುಮಾರನು ತನ್ನ ಕೈಯಲ್ಲ್ಲಿದ್ದ ಸೂಜಿಯನ್ನು ತೊರಿಸಿದನು, ಆಗ ರಾಕ್ಷಸ ಹೆದರಿ, ನನಗೇನು ಮಾಡಬೇಡ ನಿನ್ನ ಹೆಂಡತಿಯನ್ನು ಬಿಟ್ಟುಬಿಡುತ್ತೇನೆ ಎಂದು ಅಂಗಲಾಚಿದ. ರಾಜಕುಮಾರ ಆ ಸೂಜಿಯನ್ನು ಮುರಿದು ರಾಕ್ಷಸನ್ನು ಸಾಯಿಸಿ ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನ ಅರಮನೆಗೆ ಹಿಂದುರಿಗೆ, ಸುಖವಾಗಿ ನೂರು ವರ್ಷಗಳಕಾಲ ಬದುಕಿದನು.





ಕೊಂದವನಿಗು ಕರುಣೆ ತೋರಿದವ

ನೂರಾರು ವರುಷಗಳ ಹಿಂದಿನ ಮಾತು. ಆಗ ಸ್ಪೇನ್‌ ದೇಶದ ಸ್ವಲ್ಪ ಭಾಗವನ್ನು ಮೂರ್ ಜನರು (ಮೊರೊಕ್ಕೊ ದೇಶದ ನಿವಾಸಿಗಳು) ಆಕ್ರಮಿಸಿದ್ದರು. ಅದೊಂದು ದಿನ ಒಬ್ಬ ಸ್ಪೆನಿಯಾರ್ಡನು ಎಳೆಯ ಮೂರ್ ಒಬ್ಬನನ್ನು ಕೊಂದುಬಿಟ್ಟ. ಮೂರರು ಅವನನ್ನು ಅಟ್ಟಿಸಿಕೊಂಡು ಬಂದರು. ಪ್ರಾಣಭಯದಿಂದ ಅವನು ಓಡತೊಡಗಿದ. ಎದುರುಗಡೆ ಒಂದು ತೋಟವಿತ್ತು. ಅವನು ಅದರ ದರೆ ಏರಿ, ಒಳಕ್ಕೆ ಜಿಗಿದ. ಅದು ಒಬ್ಬ ಮೂರನಿಗೆ ಸೇರಿದ ತೋಟವಾಗಿತ್ತು. ತೋಟದ ಯಜಮಾನ ಅಲ್ಲಿ ನಿಂತಿದ್ದ. ಓಡಿ ಬಂದವನು ಯಜಮಾನನ ಕಾಲಿಗೆ ಅಡ್ಡ ಬಿದ್ದ. ವೈರಿಗಳು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ. ತನಗೆ ಅಡಗಿಕೊಳ್ಳಲು ಅಲ್ಲಿ ಅವಕಾಶ ಕೊಡಬೇಕು. ತನ್ನನ್ನು ಕಾಪಾಡಬೇಕು ಎಂದು ಅಂಗಲಾಚಿ ಬೇಡಿಕೊಂಡ.
ತೋಟದ ಮಾಲಿಕನು ತುಂಬ ಕರುಣಾಳು ತನ್ನೆಡೆಗೆ ಬಂದು ರಕ್ಷಣೆ ಬೇಡುತ್ತಿರುವ ಅಪರಿಚಿತನನ್ನು ಆತ ಕಣ್ಣರಳಿ ನೋಡಿದ. ಅವನಿಗೆ ಧೈರ್ಯ ಹೇಳಿದ ಅವನ ಜೀವ ಕಾಯುವುದಾಗಿ ಭರವಸೆ ನೀಡಿದ ತನ್ನ ಮಾತಿನಲ್ಲಿ ಭರವಸೆ ಹುಟ್ಟುವಂತೆ ಮಾಡಲು ಅವನಿಗೊಂದು ಹಣ್ಣನ್ನಿತ್ತ; ಅವನ ಜೊತೆ ಕೂತು ತಾನೂ ಹಣ್ಣು ತಿಂದ. (ಜೊತೆಯಾಗಿ ಕೂತು ಉಂಡವರನ್ನು ಅಥವಾ ತಿಂದವರನ್ನು ರಕ್ಷಿಸಬೇಕೆಂಬುದು ಮೂರ್ ಜನರ ಒಂದು ವಿಶಿಷ್ಟ ಪದ್ಧತಿ) ಅನಂತರ ತನ್ನ ಮರೆಹೊಕ್ಕುವನನ್ನು ತೋಟದ ಮನೆಯ ಪುಟ್ಟ ಕೋಣೆಯೊಳಗೆ ಕೂಡಿಸಿ, ಬೀಗ ಹಾಕಿದ. ಕತ್ತಲಾದೊಡನೆ ಸುರಕ್ಷಿತ ಸ್ಥಳ ಸೇರಲು ಆತನಿಗೆ ಸಹಾಯ ಮಾಡುವುದಾಗಿ ಮಾತು ಕೊಟ್ಟು, ತನ್ನ ವಾಸದ ಮನೆಗೆ ಬಂದುಬಿಟ್ಟ.
ಆ ಸಮಯಕ್ಕೆ ಸರಿಯಾಗಿ ಜನರ ದೊಡ್ಡ ಗುಂಪೊಂದು ಅವನ ಮನೆಯತ್ತ ಬರತೊಡಗಿತು. ಬಹಳ ಜನ ಅದರಲ್ಲಿದ್ದರು. ಎಲ್ಲರೂ ತುಂಬ ದುಃಖಿತರಾದಂತೆ ಕಾಣುತ್ತಿದ್ದರು. ಕೆಲವರು ಕಣ್ಣೀರು ಸುರಿಸುತ್ತಿದ್ದರೆ ಇನ್ನು ಕೆಲವರು ಅಳುತ್ತಿದ್ದರು. ಯುವಕರು ಕೆಲವರು ಸಿಟ್ಟಿನಿಂದ ಹಲ್ಲು ಕಡಿಯುತ್ತ ಪ್ರತೀಕಾರದ ಮಾತಾಡುತ್ತಿದ್ದರು. ಗುಂಪಿನ ಮಧ್ಯದಲ್ಲಿದ್ದ ಕೆಲವರು ಬಿಳಿ ಬಟ್ಟೆಯಲ್ಲಿ ಸುತ್ತಿದ ಏನನ್ನೊ ಹೊತ್ತು ತರುತ್ತಿದ್ದರು.
ಗುಂಪು ಹತ್ತಿರ ಬಂತು. ತೋಟದ ಯಜಮಾನನ ಮನೆಯಂಗಳವನ್ನು ಪ್ರವೇಶಿಸಿತು. ಗುಂಪಿನ ಮಧ್ಯದಲ್ಲಿದ್ದ ಮಂದಿಗಳು ಮುಂದೆ ಬಂದರು. ತಾವು ಹೊತ್ತು ತಂದಿದ್ದ ಹೊರೆಯನ್ನು ಮೆಲ್ಲನೆ ಇಳಸಿದರು. ಬಿಳಿ ಬಟ್ಟೆಯ ಮುಸುಕಿನೊಳಗೆ ಬಾಲಕನೊಬ್ಬನ ಹಣವಿತ್ತು. ಕ್ಷಣದಲ್ಲೆ ಮನೆಯಾತನಿಗೆ ವಿಷಯ ತಿಳಿಯಿತು. ಅವನ ಪ್ರೀತಿಯ ಮಗನ ಕೊಲೆಯಾಗಿತ್ತು. ತನ್ನ ಆಸರೆ ಪಡೆದ ಪರಕೀಯನು ಬೇರಾರೂ ಅಲ್ಲ ತನ್ನ ಮಗನನ್ನೆ ಕೊಂದವನ್ನು ಎಂಬುದು ಅವನಿಗೆ ತಿಳಿದುಹೋಗಿತ್ತು. ಆದರೆ?
ಆತನು ತನ್ನಲ್ಲಿ ದಯಾಭಿಕ್ಷೆ ಬೇಡಿದ್ದಾನೆ. ಆತನನ್ನು ರಕ್ಷಿಸುವುದಾಗಿ ತಾನು ಭಾಷೆ ನೀಡಿದ್ದೇನೆ. ಮಗನ ಸಾವಿನ ಸೇಡು ತೀರಿಸಲು ಕೊಲೆಗಾರನನ್ನು ತಾನು ಕೊಂದು ಬಿಡಬಹುದು. ಅದರಿಂಸ ಸತ್ತ ಮಗ ಮತ್ತೆ ಬದುಕಿ ಬರಲುಂಟೆ? ಹಾಗಾದರೆ ತಾನೇನು ಸಾಧಿಸಿದಂತಾಯಿತು? ಛೆ, ಇಂಥ ವಿಚಾರ ಸಲ್ಲದು. ತಾನು ಕೊಟ್ಟ ಮಾತಿಗೆ ತಪ್ಪಬಾರದು; ಕೆಟ್ಟ ಯೋಚನೆ ಮಾಡಬಾರದು ಎಂದು ಆತ ಮನಸ್ಸಿನಲ್ಲೆ ನಿರ್ಧರಿಸಿದ. ತನ್ನ ಆಸರೆಯಲ್ಲಿರುವವನ ಸುಳಿವು ಯಾರಿಗೂ ಸಿಗದಂತೆ ಎಚ್ಚರ ವಹಿಸಿದ. ಮಗನ ಸಾವಿನ ದುಃಖ ನುಂಗಿಕೊಂಡು, ಶವ ಸಂಸ್ಕಾರದ ಕೆಲಸಗಳನ್ನು ನೆರವೇರಿದ. ಅವನ ದುಃಖದಲ್ಲಿ, ಕೆಲಸಗಳಲ್ಲಿ ಸಹಭಾಗಿಗಳಾದ ಜನಗಳೆಲ್ಲ ಒಬ್ಬೊಬ್ಬರಾಗಿ ಹೊರಟು ಹೋದರು.
ಸೂರ್ಯಾಸ್ತವಾಯಿತು. ಕತ್ತಲು ಕವಿಯಿತು ಅದನ್ನೆ ಕಾಯುತ್ತಿದ್ದ ಯಜಮಾನ ದಿಗ್ಗನೆ ಎದ್ದ. ತನ್ನ ಕುದುರೆಗಳಲ್ಲಿ ಅತ್ಯುತ್ತಮವಾದುದನ್ನು ಆರಿಸಿ ಹಿಡಿದುಕೊಂಡ. ಅದರೊಡನೆ ತನ್ನ ತೋಟದ ಮನೆಗೆ ನಡೆದ.
ಕೋಣೆಯಲ್ಲಿ ಸ್ಪೇನಿಯಾರ್ಡನು ಉಸಿರು ಬಿಗಿ ಹಿಡಿದು ಕುಳಿತುಕೊಂಡಿದ್ದ. ಯಜಮಾನ ಅವನನ್ನು ಹೊರಗೆ ಕರೆ ತಂದ ಅವನಿಗೆ ಕುದುರೆಯನ್ನು ಒಪ್ಪಿಸುತ್ತ ಹೀಗೆ ಹೇಳಿದ -
“ನನ್ನ ಪ್ರೀತಿಯ ಮಗನನ್ನು ಕೊಂದವನು ನೀನು. ನಿನ್ನ ತಪ್ಪಿಗೆ ತಕ್ಕ ಶಿಕ್ಷೆ ನಿನಗೆ ಸಿಗಬೇಕಿತ್ತು. ಆದರೆ ನೀನು ನನ್ನಿಂದ ಅಭಯದಾನ ಪಡೆದಿದ್ದಿಯಾ. ನನ್ನ ‘ಜೊತೆ ಕೂತು’ ಹಣ್ಣು ತಿಂದಿದ್ದಿಯಾ. ಕೊಟ್ಟ ಮಾತನ್ನು ನಾನು ಉಳಿಸಿಕೊಳ್ಳಬೇಕು. ಆದ ಕಾರಣ ನಿನ್ನನ್ನು ಕ್ಷಮಿಸಿದ್ದೇನೆ. ನಿನಗೆ ಅತ್ಯುತ್ತಮವಾದ ಈ ನನ್ನ ಕುದುರೆಯನ್ನು ಕೊಡುತ್ತಿದ್ದೇನೆ. ತಕ್ಷಣ ಇದನ್ನೇರಿ ಕತ್ತಲೆಯಲ್ಲಿ ಕಣ್ಮರೆಯಾಗಿ ಬಿಡು. ಗಾಳಿಯ ವೇಗದಲ್ಲಿ ಓಡಬಲ್ಲ ಕುದುರೆಯಿದು. ಇದರ ಸಹಾಯದಿಂದ ಬೆಳಗಾಗುವ ಮೊದಲು ನೀನು ಸುರಕ್ಷಿತ ಸ್ಥಳ ಸೇರಬಲ್ಲೆ. ನನ್ನ ಮಗನ ಜೀವ ನೀನು ತೆಗೆದ. ಆದರೆ ನಾನು ನಿನ್ನ ಜೀವ ತೆಗೆಯುವುದಿಲ್ಲ; ನಿನಗೆ ಕೊಟ್ಟ ಮಾತನ್ನು ಮುರಿಯುವುದಿಲ್ಲ. ಯಾರಿಗೂ ಕೇಡು ಬಗೆಯಲಾರೆ ಎಂಬುದು ನನ್ನ ಪ್ರತಿಜ್ಞೆಯಾಗಿತ್ತು. ಆ ಪ್ರತಿಜ್ಞೆಗೆ ಭಂಗಬಾರದಂತೆ ದೇವರು ನೋಡಿಕೊಂಡಿದ್ದಾನೆ. ಅದಕ್ಕಾಗಿ ಅವನಿಗೆ ನನ್ನ ಅನಂತ ವಂದನೆಗಳು”
ಸ್ಪೇನಿಯಾರ್ಡನ ಕಣ್ಣುಗಳು ತುಂಬಿದ ಕೊಳಗಳಾಗಿದ್ದವು. ತೊಟ್ಟಿಕ್ಕುತಿದ್ದ ಕಣ್ಣೀರಿಂದ ಕೆನ್ನೆಗಳು ಒದ್ದೆಯಾಗಿದ್ದವು. ತಲೆ ತಗ್ಗಿಸಿಕೊಂಡೆ ನಿಂತಿದ್ದ ಅವನಿಂದ ‘ಕ್ಷಮಿಸು ತಂದೆ’ ಎಂಬ ನುಡಿಗಳೆರಡು ಹೊರಬಂದಿದ್ದವು. ಮರುಕ್ಷಣದಲ್ಲೆ ಕುದುರೆ ಏರಿದ್ದ ಆತ ಕವಿದ ಕತ್ತಲಲ್ಲಿ ಕಣ್ಮರೆಯಾಗಿದ್ದ.